ಕುನ್ನಾಳ ಸರಕಾರಿ ಶಾಲೆಯ ಯಶೋಗಾಥೆ


ಸಮುದಾಯದ ಸಹಬಾಗಿತ್ವದಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ  ಕುನ್ನಾಳ ಗ್ರಾಮದ ಸರಕಾರಿ ಶಾಲೆಯ ಅಭಿವೃದ್ಧಿಯ ಪರ್ವ


         ಸರಕಾರಿ ಶಾಲೆಗಳ ಅಭಿವೃದ್ಧಿ ಸಮುದಾಯದ ಸಹಭಾಗಿತ್ವದಿಂದ ಮಾತ್ರ ಸಾಧ್ಯ. ಗ್ರಾಮೀಣ ಭಾಗದ ಸರಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳಿಲ್ಲದೇ ಇರುವ ಕಾರಣಕ್ಕಾಗಿ ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ. ಇದನ್ನು ಮನಗಂಡು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದ ಶಿಕ್ಷಣ ಪ್ರೇಮಿಗಳು, ಶಾಲೆಯ ಹಳೆಯ ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರು ದೇಣಿಗೆಯ ಮೂಲಕ ಸರಕಾರಿ ಶಾಲೆಯ ಅಭಿವೃದ್ಧಿಗೆ ಧೃಡಸಂಕಲ್ಪ ಮಾಡಿದ್ದಾರೆ. ಆ ಧ್ಡಸಂಕಲ್ಪದ ಮೂಲಕ ಒಂದೊಂದೇ ಕನಸುಗಳನ್ನು‌ ನನಸಾಗಿಸುತ್ತಾ ಗ್ರಾಮೀಣ ಭಾಗದ ಸರಕಾರಿ‌ ಶಾಲೆಯ ಮಕ್ಕಳು ಉತ್ಕೃಷ್ಟ ಮಟ್ಟದ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಪಡೆಯುವಂತೆ ಮಾಡಿದ್ದಾರೆ.


            ಕುನ್ನಾಳ ಗ್ರಾಮವು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕೊನೆಯ ಹಳ್ಳಿಯಾಗಿದ್ದು, ಪ್ರಸ್ತುತ 2022-23 ನೇ ಸಾಲಿನಲ್ಲಿ ಒಟ್ಟು 259 ವಿದ್ಯಾರ್ಥಿಗಳು 1 ರಿಂದ 8 ನೇ ತರಗತಿಗಳಿಗೆ ಪ್ರವೇಶ ಪಡೆದಿದ್ದಾರೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಸಾಧನೆ ಗಮನಾರ್ಹವಾಗಿದೆ.  ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಬಿ ಬಿ ಹಾಲೊಳ್ಳಿ ಇವರ ಮಾರ್ಗದರ್ಶನದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಬಾಲಕಿಯರ ವಿಭಾಗದಲ್ಲಿ ನಿರಂತರವಾಗಿ ರಾಷ್ಟಮಟ್ಟದ ಖೋ ಖೋ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಸಾಧನೆ ಮಾಡಿರುವ ಈ ಶಾಲೆ, ಬೆಂಗಳೂರಿನಲ್ಲಿ ಇತ್ತೀಚಿಗೆ ಜರುಗಿದ ರಾಜ್ಯ ಮಟ್ಟದ ಮಿನಿ ಓಲಂಪಿಕ್ಸನಲ್ಲಿ ನಮ್ಮ ಶಾಲೆಯ ಬಾಲಕೀಯರ ಖೋ ಖೋ ತಂಡ ಮಿನಿ ಓಲಂಪಿಕ್ಸ ಟ್ರೋಪಿಯನ್ನು ಮುಡಿಗೇರಿಸಿಕೊಂಡಿದೆ. ಖೇಲೋ ಇಂಡಿಯಾದಲ್ಲಿಯೂ ಕೂಡ ಈ ಶಾಲೆಯ ವಿದ್ಯಾರ್ಥಿಗಳ ಸಾಧನೆ ಗ್ರಾಮ, ಶಾಲೆ ಹಾಗೂ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದೆ.  ಶ್ರೀ ಎನ್ ಎಸ್ ದೊಡಮನಿ, ವಾಯ್ ಟಿ ಬಾರ್ಕಿ, ಎಸ್ ಎ ಕಳ್ಳಿ, ಎಪ್ ಎನ್ ಕುರಬೇಟ, ವಿ ಆರ್ ಅಣ್ಣಿಗೇರಿ, ಕೆ ಬಿ‌ ಮಾಳಪ್ಪನವರ ಹಾಗೂ ಶ್ರೀಮತಿ ಅಶ್ವಿನಿ ಟಿ ಗುರುಬಳಗದ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ.


               ಕು. ಮೇಘಾ ಹಕ್ಕಿ, ಸವಿತಾ ನಾಡಗೌಡ್ರ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿ ಶಾಲೆಯ ಹಾಗೂ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. 2020-21 ನೇ ಸಾಲಿನ ಖೇಲೋ ಇಂಡಿಯಾ ಸ್ಪರ್ಧೆಯ ಖೋ ಖೋ ಪಂದ್ಯಾವಳಿಯಲ್ಲಿ ಕು. ಲಕ್ಷ್ಮೀ ಹಿರೇಮಠ ಹಾಗೂ ಅಪೂರ್ವ ಹಿರೇಮಠ ಪ್ರಶಸ್ತಿ ಪಡೆದುದು ನಮ್ಮೂರ ಶಾಲೆಗೆ ಹೆಮ್ಮೆಯ ಸಂಗತಿ. 2021-22 ನೇ ಸಾಲಿನ NMMS ಪರೀಕ್ಷೆಯಲ್ಲಿ ಉತ್ತೀರ್ಣರಾದ ಕು. ಸವಿತಾ ನಾಡಗೌಡ್ರ, ಚನ್ನಮ್ಮ ಸಿದ್ನಾಳ, ತಂಗೆವ್ವ ಕಳ್ಳಿ ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್, ಬೆಳಗಾವಿಯ ಪ್ರತಿಭಾ ಪೋಷಕ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿ ಭವಿಷ್ಯದ ಬೆಳವಣಿಗೆಗೆ ಪೂರಕವಾದ ಮಾರ್ಗದರ್ಶನವನ್ನು ನುರಿತ ಬೋಧಕರಿಂದ ಪಡೆಯುತ್ತಿದ್ದಾರೆ.


              ಶಾಲೆಯಲ್ಲಿ ಶಾಲಾ ಮಟ್ಟದ ಇಂಗ್ಲಿಷ್ ಪೆಸ್ಟ, ಇಂಗ್ಲಿಷ್ ಗ್ರಾಮರ್, ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಾಗಾರಗಳನ್ನು ಕೂಡ ನಡೆಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ನವೋದಯ, ಮುರಾರ್ಜಿ ವಸತಿ ಶಾಲಾ ಪರೀಕ್ಷೆ, NMMS ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವಂತೆ ಮಾಡಲು ಕ್ರಿಯಾಶೀಲ ಶಿಕ್ಷಕರ ತಂಡ ನಿರಂತರವಾಗಿ ಪ್ರಯತ್ನಿಸುತ್ತಿದೆ.


              2019-20 ನೇ ಸಾಲಿನ ಜಿಲ್ಲಾ ಮಕ್ಕಳ ಪ್ರಶಸ್ತಿಗೆ ಈ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿನಿ ಸವಿತಾ ನಾಡಗೌಡ್ರ ಭಾಜನರಾಗಿದ್ದಾರೆ. ಶಿಕ್ಷಕರು ಮಕ್ಕಳಿಗಾಗಿ ತಂತ್ರಜ್ಞಾನ ಆದಾರಿತ ಕಲಿಕೋಪಕರಣಗಳನ್ನು ಬಳಸಿ ತರಗತಿಗಳನ್ನು ನಡೆಸುವ ಮೂಲಕ ಮಕ್ಕಳು ಸಂಪೂರ್ಣವಾದ ಡಿಜಿಟಲ್ ಜ್ಞಾನವನ್ನು ಹೊಂದುವಂತೆ ಮಾಡಿದ್ದಾರೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ TeachMint ಮೂಲಕ ಎಲ್ಲ ತರಗತಿಗಳಿಗೆ ಆನಲೈನ್ ಬೋಧನೆ, Pschool App, Live Worksheet ಗಳನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಕೋವಿಡ್ ನಡುವೆಯೂ ಮಕ್ಕಳಿಗೆ ಕಲಿಕಾ ಕೊರತೆಯಾಗದಂತೆ   ಮಾಡುವಲ್ಲಿ ಶಿಕ್ಷಕರ ಸಾಂಘಿಕ ಪ್ರಯತ್ನ ಯಶಸ್ವಿಯಾಗಿದೆ.

                ಈ ಸಾಲಿನ ವಿದ್ಯಾರ್ಥಿ ವೇತನದ ಆನಲೈನ್ ಅರ್ಜಿಗಳನ್ನು ಈ ಶಾಲೆಯ 6 ರಿಂದ 8 ನೇ ತರಗತಿ ವಿದ್ಯಾರ್ಥಿಗಳೇ ಸಲ್ಲಿಸಿರುವುದು ಮಕ್ಕಳ ಪ್ರತಿಭೆಗೆ ಹಿಡಿದ ಕೈಗನ್ನಡಿ. ಇದಕ್ಕೆ ಪ್ರಮುಖ ಕಾರಣ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಹಕಾರದ ಫಲವಾಗಿ ರೂ. 2.5 ಲಕ್ಷ ರೂ.ಗಳ ವೆಚ್ಚದಲ್ಲಿ ನರ್ಮಾಣಗೊಂಡ  ಹತ್ತು ಗಣಕಯಂತ್ರಗಳನ್ನು ಒಳಗೊಂಡ ಸುಸಜ್ಜಿತ "ಗೂಗಲ್ ಡಿಜಿಲ್ಯಾಬ್" (ಗಣಕಯಂತ್ರ ಪ್ರಯೋಗಾಲಯ). 6 ರಿಂದ 8 ನೇ ತರಗತಿಯ ಬಹುತೇಕ‌ ಮಕ್ಕಳು ಗಣಕಯಂತ್ರದ Basic Knowledge ಹೊಂದುವ ಮೂಲಕ ಸಮುದಾಯದ ಪ್ರೀತಿಗೆ ಪ್ರತಿಸ್ಪಂದಿಸಿದ್ದಾರೆ. ಮಕ್ಕಳು Microsoft Word, Microsoft Excel ಹಾಗೂ Power Point Presentation ಗಳನ್ನು ಬಳಸುತ್ತಿರುವುದು ಸಂಪನ್ಮೂಲಗಳ ಲಬ್ಯತೆಯಿಂದ ಮಕ್ಕಳು ಏನು‌ ಬೇಕಾದರೂ ಸಾಧಿಸಬಲ್ಲರು ಎನ್ನುವುದಕ್ಕೆ‌ ನಿದರ್ಶನ.

            ಶಾಲೆಯ ಹೊರಗೋಡೆಯ ಕಪ್ಪು ಹಲಗೆಗಳ ಮೇಲೆ ಭಗತ್ ಸಿಂಗ್ ಯುಥ ಕ್ಲಬ್, ಕುನ್ನಾಳ ಇವರ ದೇಣಿಗೆಯ ಸಹಾಯದಿಂದ ಸ್ವಾತಂತ್ರ್ಯ ಹೋರಾಟಗಾರರ, ಜ್ಞಾನಪೀಠ ಪ್ರಶಸ್ತಿ ವಿಜೇತರ, ರಾಷ್ಟ್ರೀಯ ಚಿಹ್ನೆಗಳ ಹಾಗೂ ಮಕ್ಕಳ ಕಲಿಕೆಗೆ ಉಪಯುಕ್ತವಾದ ಚಿತ್ರಗಳನ್ನು ಬರೆಯಿಸಲಾಗಿದೆ.

                   ಸುಸಜ್ಜಿತ ಆಟದ ಮೈದಾನ, ಸಾಲುಮರದ ತಿಮ್ಮಕ್ಕ ಹೆಸರಿನ ಇಕೋ ಕ್ಲಬ್ ಅಡಿಯಲ್ಲಿ ವನ‌ಮಹೋತ್ಸವದ ಹಸಿರು ಶಾಲೆಯನ್ನಾಗಿಸಿದ್ದಾರೆ. ಪ್ರತಿ ತರಗತಿಯಲ್ಲೂ ಸತ್ಯ, ಅಹಿಂಸೆ ಹಾಗೂ ಸಹಕಾರ ಎಂಬ ಮೂರು ತಂಡಗಳನ್ನಾಗಿಸಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ಸ್ಪರ್ಧಾತ್ಮಕ ಮನೋಭಾವ ಬೆಳೆಯುವಂತೆ ಮಾಡಲಾಗಿದೆ.

ಎಲ್ಲ ಕಾರ್ಯಕ್ರಮಗಳ ಸಂಘಟನೆ ಹಾಗೂ ನಿರೂಪಣೆಯ ಜವಾಬ್ದಾರಿಯನ್ನು ಸಹ ಶಿಕ್ಷಕರ ಸಹಕಾರದಿಂದ ಮಕ್ಕಳೇ ನಿರ್ವಹಿಸುವುದು ಮಕ್ಕಳ ಕ್ರಿಯಾಶೀಲತೆಯನ್ನು ಎತ್ತಿ ತೋರಿಸುತ್ತದೆ.


       ಗೂಗಲ್ ಡಿಜಿಲ್ಯಾಬ್ (ಕಂಪ್ಯೂಟರ್ ಲ್ಯಾಬ್) ಕನಸನ್ನು ನನಸಾಗಿಸಲು ಗ್ರಾಮದ ಮುತ್ತಪ್ಪ ಮಳಲಿ, ಸಂತೋಷ ತಿಪ್ಪಿ, ಈರಣ್ಣ ಕೌಜಲಗಿ, ರಮೇಶ ಮಳಲಿ, ಲಕ್ಷ್ಮಣ ಜೀರಗಾಳ, ಮಲ್ಲಪ್ಪ ಶೆಟ್ಟರ, ಮಂಜು ಮಳಲಿ, ಮಹಾದೇವ ಮಳಲಿ, ಪ್ರವೀಣ ನಾಡಗೌಡ್ರ, ಕಾಶವ್ವ ಗುಡದನ್ನವರ, ಡಾ. ಈರಣ್ಣ ಕಳ್ಳಿ, ಶಾಂತಾ ಸುಣದೊಳಿ, ಶಿವಾನಂದ ಛಾಯಪ್ಪಗೋಳ, ಕರೆಪ್ಪ ಮಾಕನ್ನವರ, ಶಿವರಾಜ ಹುದ್ದಾರ ಇವರುಗಳು ದೇಣಿಗೆ ನೀಡಿದ್ದಾರೆ.


ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀಕಾಂತ ಮಕ್ಕಳಗೇರಿ ಹಾಗೂ ಉಪಾಧ್ಯಕ್ಷರಾದ ಹಣಮಂತ ಗಾಣಿಗೇರ ಉತ್ತಮ ಗುಣಮಟ್ಟದ ಪ್ರಿಂಟರ್ ಕಂ ಝರಾಕ್ಸ ಮಶೀನ್ ನೀಡಿದ್ದಾರೆ. ಗ್ರಾಮದ ಇಂಜಿನಿಯರ್ ಸುನೀಲ ಮಳಲಿ ಆ್ಯಪಲ್ ಕಂಪನಿಯ ‌ಮ್ಯಾಕಬುಕ ಪ್ರೋ ಲ್ಯಾಪ್‌ಟಾಪ್ ಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ. ಸಂತೋಷ ಜಕಾತಿ ಕಂಪ್ಯೂಟರ್ ಲ್ಯಾಬ್ ಯು.ಪಿ.ಎಸ್ ವ್ಯವಸ್ಥೆಯನ್ನು ಮಾಡಿಸಿದ್ದಾರೆ.Universe Nano Innovative Lab (SocioMathScience ) ಪ್ರಯೋಗಾಲಯಕ್ಕೆ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ಶಾಂತಾ ಪತ್ರೆಪ್ಪ ಸುಣದೋಳಿ 1ಲಕ್ಷ 30 ಸಾವಿರ ರೂಪಾಯಿಗಳು, ನಿವೃತ್ತ ತಹಶೀಲ್ದಾರರಾದ ಎಮ್ ಬಿ ನಾಡಗೌಡ್ರ ರೂ. 50,000 ಗಳನ್ನು ಹಾಗೂ ಇತರ ದಾನಿಗಳು ತಲಾ ರೂ. 20,000 ನೀಡಿ ಒಟ್ಟು 3,50,000 ರೂಗಳ ವೆಚ್ಚದಲ್ಲಿ ಈ‌ ಪ್ರಯೋಗಾಲಯ ನಿರ್ಮಾಣಕ್ಕೆ ಸಹಕರಿಸಿದ್ದಾರೆ. 

ಗ್ರಾಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿರುವ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಕೂಡ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶಗಳನ್ನು ನೀಡಲಾಗುತ್ತಿದೆ.  ಸ್ಥಳೀಯ ವರಗನವರ ಕುಟುಂಬವು ನಮ್ಮ ಶಾಲೆಯ ಮಾಜಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ದಿ. ನಿಂಗಪ್ಪ ವರಗನವರ ಸ್ಮರಣಾರ್ಥ 1.50 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ "ಜ್ಞಾನ ದೀವಿಗೆ ಗ್ರಂಥಾಲಯ" ವನ್ನು ನಿರ್ಮಿಸಿದ್ದಾರೆ. ಈ ಗ್ರಂಥಾಲಯವನ್ನು ಶಾಲಾ ಅವದಿಯ ನಂತರ ಶಾಲೆಯ ಹಳೆಯ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಬಳಸುತ್ತಿರುವುದು ಭರವಸೆಯ ಆಶಾಕಿರಣವಾಗಿದೆ.  ಗ್ರಾಮ ಪಂಚಾಯತಿ ಸದಸ್ಯರಾದ ವಿಠ್ಠಲ ಗುಡಗುಡಿ 1 ಲಕ್ಷ ರೂ ಮೊತ್ತದ ಟೀ ಶರ್ಟ್ ಹಾಗೂ ಪ್ಯಾಂಟ್ ಎಲ್ಲ 259 ಮಕ್ಕಳಿಗೆ ಕೊಡುಗೆಯಾಗಿ‌ ನೀಡಿ ತಮ್ಮ ಶೈಕ್ಷಣಿಕ ಪ್ರೀತಿಯನ್ನು ತೋರಿದ್ದಾರೆ.

ಬೆಳಗಾವಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀ ದರ್ಶನ್ ಹೆಚ್ ವಿ, ರಾಮದುರ್ಗ ತಹಶೀಲ್ದಾರ ಶ್ರೀ‌ಮಲ್ಲಿಕಾರ್ಜುನ ಹೆಗ್ಗನ್ನವರ, ರಾಮದುರ್ಗ ತಾ.ಪಂ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀ ಪ್ರವೀಣ ಸಾಲಿ ಶಾಲೆಗೆ ಬೇಟಿ ನೀಡಿ ಅಗತ್ಯ ಮಾರ್ಗದರ್ಶನ ಹಾಗೂ ಅಭಿವೃದ್ಧಿಗೆ ಪೂರಕವಾಗಿ ನರೇಗಾ ಯೋಜನೆಯಡಿಯಲ್ಲಿ ಅಡುಗೆ ಕೋಣೆ, ಪೇವರ್ಸ ಅಳವಡಿಕೆ, ಮೈದಾನ ಅಭಿವೃದ್ಧಿ, ಕಂಪೌಂಡ ನಿರ್ಮಾಣ ಹಾಗೂ ಶೌಚಾಲಯಗಳ‌ ನಿರ್ಮಾಣದ ಮೂಲಕ‌ ಶಾಲಾ ಅಂದಕ್ಕೆ‌ ಮತ್ತಷ್ಟು ಮೆರಗು ನೀಡಿದ್ದಾರೆ.

       ಇತ್ತೀಚಿಗೆ ಬೆಳಗಾವಿಯ ಪ್ರತಿಷ್ಠಿತ ಲೇಕವ್ಯೂವ್ ಆಸ್ಪತ್ರೆಯ ವೈದ್ಯರಾಗಿರುವ ಶ್ರೀ ಶಶಿಕಾಂತ ಕುಲಗೊಡ ನೇತೃತ್ವದ ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ಧನಸಹಾಯದಿಂದ 75 ಇಂಚಿನ Interactive Smart Board ಒಳಗೊಂಡ ಸ್ಮಾರ್ಟ್ ಕ್ಲಾಸ್ ಕಂ English Language Lab ನಿರ್ಮಿಸಲಾಗಿದೆ. 

     ದಾಲ್ಮಿಯಾ ಪೌಂಡೇಶನ್ ವತಿಯಿಂದ ಶಾಲಾ‌ ಮಕ್ಕಳಿಗಾಗಿ ಶುದ್ದ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ.ಹೀಗೆ ಸಮುದಾಯದ ಸಹಭಾಗಿತ್ವದಲ್ಲಿ ಸರಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸುವ ದಿಶೆಯಲ್ಲಿ ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ದೇಣಿಗೆಯ‌ ಮೂಲಕ ಶಾಲೆಯನ್ನು ಸಶಕ್ತಗೊಳಿಸಲು ಪ್ರಯತ್ನಿಸುತ್ತಿರುವ ಪ್ರೇರಣಾಧಾಯಿ ಕಾರ್ಯವನ್ನು ಶಾಲೆಯ ಮುಖ್ಯ ಗುರುಗಳು, ಸಹ ಶಿಕ್ಷಕರು ಹಾಗೂ ಮುದ್ದು ವಿದ್ಯಾರ್ಥಿಗಳು ಮುಕ್ತ ಕಂಠದಿಂದ ಪ್ರಶಂಶಿಸುತ್ತಾರೆ.


ಧನ್ಯವಾದಗಳು

ಉಮೇಶ್ವರ ಸೋಮಪ್ಪ ಮರಗಾಲ

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ

ಸ ಹಿ ಪ್ರಾ ಶಾಲೆ ಕುನ್ನಾಳ

ತಾ: ರಾಮದುರ್ಗ ಜಿ: ಬೆಳಗಾವಿ

ಮೊಬೈಲ್: 9620132075

abk.umesh@gmail.com

Comments

Popular posts from this blog

ವಿಜ್ಞಾ‌ನ ವಸ್ತು ಪ್ರದರ್ಶನ

ಕುನ್ನಾಳ ಪಿಎಂಶ್ರೀ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಮುದಾಯವೇ ಸರಕಾರಿ ಶಾಲೆಗಳ ಶಕ್ತಿ