ಸವಾಲುಗಳಿದ್ದರೆ ಸಾಧನೆಗೆ ಮೆರಗು


 ಪ್ರತಿಯೊಬ್ಬರ ಜೀವನದಲ್ಲಿ ಸವಾಲುಗಳು ಎದುರಾಗುವುದು ಸಹಜ ಮತ್ತು ಅನಿವಾರ್ಯ.  ಅವುಗಳು ವಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿಯೂ ಕೂಡ ಸಾಮಾನ್ಯವಾಗಿವೆ. ಎಲ್ಲರೂ ಸಮಸ್ಯೆಗಳೇ ಇಲ್ಲದ ಜೀವನವನ್ನು, ವೃತ್ತಿಯನ್ನು ಬಯಸುತ್ತೇವೆ. ಅದಕ್ಕಾಗಿ ಇನ್ನಿಲ್ಲದ ಪ್ರಯತ್ನಗಳನ್ನೂ ಮಾಡುತ್ತೇವೆ.  ಆದಾಗ್ಯೂ, ಸವಾಲುಗಳು ನಮ್ಮನ್ನು ಬಿಡುವುದಿಲ್ಲ. ಕ್ಲಿಷ್ಟಕರ ಸಮಸ್ಯೆಗಳನ್ನು ಎದುರಿಸಿದಷ್ಟು ಪರಿಪಕ್ವತೆ ಹಾಗೂ ಪರಿಪೂರ್ಣತೆಯ ವ್ಯಕ್ತಿತ್ವ ನಮ್ಮದಾಗುತ್ತದೆ.


ಸಮಸ್ಯೆಗಳು ಎದುರಾದಾಗ ಭಯದಿಂದ ಅವುಗಳಿಂದ ತಪ್ಪಿಸಿಕೊಳ್ಳಲು ಯತ್ನಸಿದೇ ಅವುಗಳನ್ನು ಎದುರಿಸುವ ಗಟ್ಟಿತನವನ್ನು ಬೆಳೆಸಿಕೊಳ್ಳಬೇಕು. ಒಂದೊಂದು ಸಮಸ್ಯೆಗಳು ಒಂದೊಂದು ಮಹತ್ವದ ಪಾಠವನ್ನು ಕಲಿಸುತ್ತವೆ. ಭಯದ ನಡುವೆಯೂ ಮುನ್ನುಗ್ಗುವ ಛಾತಿಯನ್ನು ಬೆಳೆಸುತ್ತವೆ. ಆಕಾಶವೇ ಕಳಚಿ ಬಿದ್ದಂತೆ ವರ್ತಿಸುವವರು ಕೂಡ ಆತ್ಮವಿಶ್ವಾಸದಿಂದ ಎದುರಿಸುವ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ಆದರೆ ಮನುಷ್ಯನ ಅತೀ ದೊಡ್ಡ ದೌರ್ಬಲ್ಯ ಎಂದರೆ ಅನಿವಾರ್ಯ ಆದಾಗ ಮಾತ್ರ ನಾವು ಎಲ್ಲವನ್ನು ಎದುರಿಸಲು ಸಿದ್ದರಾಗುತ್ತೇವೆ. ಅದರಿಂದ ನುಣುಚಿಕೊಳ್ಳುವ ಒಂದು ಸಣ್ಣ ಅವಕಾಶ ಸಿಕ್ಕರೂ ಪಲಾಯನ ಮಾಡುವವರ ಪಂಕ್ತಿಯಲ್ಲಿ ನಾವೇ ಮೊದಲಿಗರಾಗಿರುತ್ತೇವೆ. ಈ ರೀತಿಯ ವರ್ತನೆಯೇ ಬದುಕನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವಲ್ಲಿ, ಅಸಾಮಾನ್ಯವಾದುದನ್ನು ಸಾಧಿಸುವಲ್ಲಿ ನಮಗೆ ತೊಡಕಾಗಿ ಪರಿಣಮಿಸುತ್ತವೆ. 


 ಪ್ರತಿಯೊಂದು ಸವಾಲು ವಿಶಿಷ್ಠವಾದ ಕಲಿಕೆ ಮತ್ತು ವಯಕ್ತಿಕ ಹಾಗೂ ವೃತ್ತಿಪರ ಬೆಳವಣಿಗೆಗೆ ಅವಕಾಶಗಳನ್ನು ಒದಗಿಸುತ್ತದೆ. ಸವಾಲುಗಳನ್ನು ಎದುರಿಸಿ ನಾವು ಯಶಸ್ವಿಯಾಗಲಿ ಅಥವಾ ವಿಫಲವಾಗಲಿ, ಆ ದಾರಿಯಲ್ಲಿ ನಮ್ಮ ಪಾತ್ರ ಮತ್ತು ಸಾಮರ್ಥ್ಯಗಳನ್ನು ಅರಿಯುವ ಹಾಗೂ ಭವಿಷ್ಯದ ಬೆಳವಣಿಗೆಗೆ ಪೂರಕವಾದ ಅನುಭವಗಳನ್ನು ನಾವು ಪಡೆಯುತ್ತೇವೆ.  ತೊಂದರೆಗಳನ್ನು ಕಲಿಕೆಯ ಅವಕಾಶಗಳನ್ನಾಗಿ ಪರಿವರ್ತಿಸುವ, ಹಿನ್ನಡೆಗಳನ್ನೇ  ಯಶಸ್ಸಿನ ಹಾದಿಗೆ ಮೆಟ್ಟಿಲುಗಳನ್ನಾಗಿಸಿ ಗುರಿ ಸಾಧಿಸುವ ಮನಸ್ಥಿತಿಯೊಂದಿಗೆ ಮನಸ್ಥಿತಿಯೊಂದಿಗೆ ಸಾಗಬೇಕು. ಅದನ್ನೇ ನಮ್ಮ ಹಿರಿಯರು ಪೆಟ್ಟು ತಿಂದಷ್ಟು ಗಟ್ಟಿಯಾಗುತ್ತೇವೆ ಎಂದು ಪ್ರೇರಣೆಗಾಗಿ ಹೇಳಿದ್ದು ಎನ್ನುವ ಸತ್ಯವನ್ನು ತಿಳಿಯಬೇಕು.


ಭಯ ಮತ್ತು ಅನುಮಾನಗಳು ಸವಾಲುಗಳ ನೆರಳಿದ್ದಂತೆ, ಅವುಗಳು ಸವಾಲುಗಳನ್ನೇ ಹಿಂಬಾಲಿಸಿಕೊಂಡು ನಮ್ಮ ಸಾಮರ್ಥ್ಯದ ಬಗ್ಗೆ ನಮಗಿರುವ ಭರವಸೆಯನ್ನು, ನಂಬಿಕೆಯನ್ನು ಕಡಿಮೆ ಮಾಡುವ ಶತ್ರುಗಳಂತೆ ಕೆಲಸ ಮಾಡುತ್ತವೆ. ವೈಫಲ್ಯಗಳನ್ನೇ ವೈಭವೀಕರಿಸಿ ಸೋತವರ ಉದಾಹರಣೆಗಳನ್ನೇ ಮತ್ತೆ ಮತ್ತೆ ನೆನಪಿಸಿ ಆತ್ಮವಿಶ್ವಾಸವನ್ನು ಕುಗ್ಗುವಂತೆ ಮಾಡುತ್ತವೆ. ಇವೆಲ್ಲವುಗಳನ್ನು ಮೀರಿ ಸಾಗಬೇಕಾದ ಮನೋಬಲವನ್ನು ನಾವು ಹೊಂದಿರಲೇಬೇಕು. ಮುಂದೆ ಏನು? ಎನ್ನುವುದು ಗೊತ್ತಿಲ್ಲದೇ ಮಾಡಿದ ಪಯಣಗಳು ಹಲವು ಅನ್ವೇಷಣೆಗಳಿಗೆ ಕಾರಣವಾಗಿವೆ. ಏನನ್ನಾದರೂ ಸಾಧಿಸಿಯೇ ತೀರುತ್ತೇನೆ ಎಂದು ಆತ್ಮ ವಿಶ್ವಾಸದಿಂದ ಮುನ್ನುಗ್ಗಿದವರೆಲ್ಲ ಅಂದುಕೊಂಡದ್ದಕ್ಕಿಂತೆ ಹೆಚ್ಚಿನದನ್ನೇ ಸಾಧಿಸಿದ್ದಾರೆ. ನಮ್ಮೊಳಗೂ ಒಂದು ಶಕ್ತಿ ಇದೆ, ಆ ಶಕ್ತಿ ಎಲ್ಲವನ್ನೂ ಎದುರಿಸಿ ಗೆಲುವಿನ ದಡ ಸೇರಿಸುವ ನಂಬಿಕೆ ಮೊದಲು ನಮಗಿರಬೇಕು. ಹಾಗಾದರೆ ಸಾಕು, ನಾವು ಸಾಗುವ ಯಶಸ್ಸಿನ ಪಯಣದಲ್ಲಿ ಅರ್ಧ ಯಶಸ್ಸು ಸಾಧಿಸಿದಂತೆಯೇ ಸರಿ. 


ಸಾಧಿಸಲೇಬೇಕೆಂದು ಹೊರಟವನಿಗೆ ಸವಾಲುಗಳ ಸದ್ದು ಕೇಳಿಸುವುದೇ ಇಲ್ಲ, ಕಾರಣವಿಷ್ಟೇ.. ಅವನೊಳಗಿನ ಭರವಸೆಯೆಂಬ ಬೆಳಕಿನ ತೀವ್ರತೆಯು ಕಗ್ಗತ್ತಲೆಯನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ ಎಂಬ ಅದಮ್ಯ ವಿಶ್ವಾಸ ಅವನಲ್ಲಿರುತ್ತದೆ. ಸೋಲಿಗೆ ನೆಪಗಳನ್ನು ಹೇಳಿ ಸಮರ್ಥಿಸಿಕೊಳ್ಳುವ ಬದಲು ಸೋಲಿನ ಪಾಠಗಳ ಅನುಭವಗಳನ್ನೇ ಗೆಲುವಿಗೆ ಮುನ್ನುಡಿಯಾಗಿ ಮುಂದುವರೆಯುವ ಉತ್ಸಾಹ ತೋರಿಸುತ್ತಾನೆ. ಆ ಉತ್ಸಾಹವೇ ಸಾಕು, ಯಶಸ್ಸಿನ‌ ಕಿರೀಟ ಧರಿಸಿ ವಿಜ್ರಂಭಿಸಲು. ಸಾಧಕನಾಗುವ ಬಯಕೆ ಇದ್ದವನಿಗೆ ಸವಾಲುಗಳೇ ಸಾಧನೆಯ ಫಥವನ್ನು ತೋರಿಸುತ್ತವೆ ಎಂಬ ನಂಬಿಕೆಯಿಂದ ಮುಂದೆ ಸಾಗಿ ಸಾಧಕರಾಗುವ ಸಂಕಲ್ಪ ಮಾಡೋಣ. ಇಂದಿನ ಯುವ ಪೀಳಿಗೆಯ ಅತಿ ದೊಡ್ಡ ಅವಶ್ಯಕತೆಯೇ ಆತ್ಮವಿಶ್ವಾಸ. ಆತ್ಮವಿಶ್ವಾಸದ ಹೆಜ್ಜೆಗಳೇ ಯಶಸ್ಸಿನ ಉಸಿರು ಎನ್ನುವುದು ಕೂಡ ಅಷ್ಟೇ ಸತ್ಯ.


ಉಮೇಶ್ವರ ಸೋಮಪ್ಪ‌ ಮರಗಾಲ

ಶಿಕ್ಷಕರು ಹಾಗೂ ಲೇಖಕರು

ಹಿರೇಬೂದನೂರ

ತಾ: ಸವದತ್ತಿ ಜಿ: ಬೆಳಗಾವಿ

ಮೊಬೈಲ್ : 9620132075



 

Comments

Popular posts from this blog

ವಿಜ್ಞಾ‌ನ ವಸ್ತು ಪ್ರದರ್ಶನ

ಕುನ್ನಾಳ ಪಿಎಂಶ್ರೀ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಮುದಾಯವೇ ಸರಕಾರಿ ಶಾಲೆಗಳ ಶಕ್ತಿ