ಹುಲಕುಂದ: ವಾರ್ಷಿಕ ಸ್ನೇಹ ಸಮ್ಮೇಳನ
5ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ, ವಾರ್ಷಿಕ ಸ್ನೇಹ ಸಮ್ಮೇಳನ, ಗುರುವಂದನೆ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಕಾರ್ಯಕ್ರಮ ಹೀಗೆ ಹಲವಾರು ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹುಲಕುಂದ. "ಮನಸ್ಸಿದ್ದರೆ ಮಾರ್ಗ" ಎನ್ನುವ ಮಾತು ಇಲ್ಲಿ ಸಾಧ್ಯವಾಗಿತ್ತು, ಸಾಧ್ಯವಾಗಿಸಿದ್ದು ಶ್ರೀ ಎ ಕೆ ಮುಳ್ಳೂರ ಮುಖ್ಯ ಗುರುಗಳು, ಶ್ರೀಮತಿ ರಂಜನಾ ಬೂದಿ ಗುರುಮಾತೆಯರು, ಎಸ್.ಡಿ.ಎಮ್.ಸಿ ಪದಾಧಿಕಾರಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು.
20 ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯ ಈ ಕಾರ್ಯಕ್ರಮದಲ್ಲಿ ದೊಡ್ಡ ಶಾಲೆಗಳಿಗೂ ಕಡಿಮೆ ಇಲ್ಲದ 20 ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಲೆಯ ಅಭಿವೃದ್ದಿಯ ಸಂಕಲ್ಪದೊಂದಿಗೆ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ, ಗ್ರಾಮ ಪಂಚಾಯತಿ ಎಲ್ಲ ಸದಸ್ಯರನ್ನೂ ವೇದಿಕೆಗೆ ತರುವ ಪ್ರಯತ್ನ, ಅಕ್ಕಪಕ್ಕದ ಎಲ್ಲ ಶಾಲೆಗಳ ಶಿಕ್ಷಕರೂ ಈ ಕಾರ್ಯಕ್ರಮದಲ್ಲಿ ಇರುವಂತೆ ಮಾಡಿದ ಪ್ರೀತಿಯ ಆಮಂತ್ರಣ, ಶಾಲೆಯ ಶಿಕ್ಷಕರು ಶಾಲೆಯ ಅವಶ್ಯಕತೆಗಳ ಕುರಿತು ಮನವಿ ಮಾಡುವ ಮುನ್ನವೇ ವೇದಿಕೆ ಮೇಲಿದ್ದ ಗಣ್ಯರೆಲ್ಲ ಸ್ಪಂದಿಸಿದ್ದು, ಮಕ್ಕಳ ಕಾರ್ಯಕ್ರಮಗಳನ್ನು ಶಿಕ್ಷಕರೇ ಸಂಭ್ರಮಿಸಿದ್ದು ತಯಾರಿಯಲ್ಲಿ ಅವರ ಶ್ರಮವನ್ನು ತೋರಿಸುತಿತ್ತು. ಎಲ್ಲವೂ ಕುಳಿತಲ್ಲಿಯೇ ಸಿಗುವ ರೀತಿಯಲ್ಲಿ ಕ್ರಿಯಾಶೀಲ ಹಳೆಯ ವಿದ್ಯಾರ್ಥಿಗಳ ಓಡಾಟ, ಅವರ ಉತ್ಸಾಹದಲ್ಲಿ ತಮ್ಮ ಶಾಲೆಯ ಕುರಿತಾದ ಪ್ರೀತಿಯಿತ್ತು. ಇತರ ಶಾಲೆಗಳ ಶಿಕ್ಷಕರೆಲ್ಲ ತಮ್ಮ ಶಾಲೆಯ ಕಾರ್ಯಕ್ರಮದಂತೆ ಶ್ರಮಿಸಿದ್ದು ಇಲ್ಲಿ ವಿಶೇಷ ಎನಿಸಿತು.
ಈ ಪುಟ್ಟ ಶಾಲೆಯಲ್ಲಿ ಇವೆಲ್ಲವನ್ನೂ ನೋಡುತ್ತಲೇ, ಅನುಭವಿಸುತ್ತಲೇ, ಆಸ್ಚಾದಿಸುತ್ತಲೇ ಕಾರ್ಯಕ್ರಮದ ನಿರೂಪಣೆ ಮಾಡಿದ್ದು ಸಾರ್ಥಕ ಭಾವ ಮೂಡಿಸಿತು. ಕಾರ್ಯಕ್ರಮ ಮುಗಿದಾಗ ಅರಿವಿಲ್ಲದೇ ಕಣ್ಣಂಚಲ್ಲಿ ನೀರಿತ್ತು. ಮಕ್ಕಳಿಗಾಗಿ ಏನಾದರೂ ಮಾಡಲೇಬೇಕು ಎನ್ನುವ ತುಡಿತವಿದ್ದರೆ ಸಾಕು ಅದ್ಭುತಗಳನ್ನೇ ಸೃಷ್ಟಿಸಬಹುದು ಎಂಬುದನ್ನು ಈ ಕಾರ್ಯಕ್ರಮದ ಮೂಲಕ ಈ ಶಾಲೆಯ ಶಿಕ್ಷಕ ವೃಂದ ಸಾಧಿಸಿ ತೋರಿಸಿತು. ಪ್ರಯತ್ನಗಳು ಎಂದಿಗೂ ಸೋಲುವುದಿಲ್ಲ ಎಂದು ನಾನೇ ಪದೇ ಪದೇ ಹೇಳುವ ಮಾತು ಮತ್ತೊಮ್ಮೆ ಇಲ್ಲಿ ಗೆದ್ದು ಬೀಗಿತು.
ಈ ಶಾಲೆಯ ಇಡೀ ಬಳಗಕ್ಕೆ ನನ್ನದೊಂದು ದೊಡ್ಡ ಸಲಾಮ್. ಭವಿಷ್ಯ ಶಕ್ತಿಯುತವಾಗಿರಲಿ..!!
*ಉಮೇಶ್ವರ ಮರಗಾಲ*
ಪಿಎಂಶ್ರೀ ಸರಕಾರಿ ಶಾಲೆ ಕುನ್ನಾಳ
#LPSHulkund #HulkundCluster
Comments
Post a Comment