*ನಾನು ಎನ್ನುವ ಅಹಂ: ವ್ಯಕ್ತಿತ್ವ ವಿಕಸನಕ್ಕೆ ಮಾರಕ*
ಮಾನವನ ಜೀವನದಲ್ಲಿ ವ್ಯಕ್ತಿತ್ವ ವಿಕಸನವು ನಿರಂತರ ಪ್ರಕ್ರಿಯೆ. ಬಾಲ್ಯದಿಂದ ವೃದ್ಧಾಪ್ಯದವರೆಗೂ ನಾವು ಕಲಿಯುತ್ತಾ, ಬೆಳೆಯುತ್ತಾ, ನಮ್ಮನ್ನು ನಾವು ರೂಪಿಸಿಕೊಳ್ಳುತ್ತಾ ಹೋಗುತ್ತೇವೆ. ಆದರೆ, ಈ ವಿಕಸನಕ್ಕೆ ಅತಿ ದೊಡ್ಡ ಅಡ್ಡಿಯಾಗಿ ನಿಲ್ಲುವುದು 'ನಾನು' ಎನ್ನುವ ಅಹಂ. ಅಹಂ ಎಂದರೆ ಕೇವಲ ದುರಹಂಕಾರವಲ್ಲ, ಬದಲಿಗೆ ತನ್ನ ಬಗ್ಗೆ ತಾನೇ ಇಟ್ಟುಕೊಂಡಿರುವ ಅತಿಯಾದ ಅಭಿಮಾನ, ತನ್ನನ್ನೇ ಕೇಂದ್ರವಾಗಿಟ್ಟುಕೊಂಡು ಯೋಚಿಸುವ ಪ್ರವೃತ್ತಿ. ಈ ಅಹಂಕಾರವು ನಮ್ಮನ್ನು ಸೀಮಿತಗೊಳಿಸುತ್ತದೆ. ಬೆಳೆಯದಂತೆ ಮಾಡುತ್ತದೆ. 'ನಾನು ಹೇಳಿದ್ದೇ ಸರಿ', 'ನನಗಿಂತ ಯಾರೂ ಉತ್ತಮರಲ್ಲ', 'ನನ್ನ ನಿರ್ಧಾರವೇ ಅಂತಿಮ' ಎಂಬ ಭಾವನೆಗಳು ನಮ್ಮನ್ನು ಹೊಸ ವಿಷಯಗಳನ್ನು ಕಲಿಯುವುದರಿಂದ, ಇತರರ ಅಭಿಪ್ರಾಯಗಳನ್ನು ಆಲಿಸುವುದರಿಂದ ಮತ್ತು ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದರಿಂದ ದೂರವಿಡುತ್ತವೆ. ಇದು ನಮ್ಮ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಅಹಂ ಇರುವ ವ್ಯಕ್ತಿ ತಾನು ಎಲ್ಲವನ್ನೂ ಬಲ್ಲೆ ಎಂದು ಭಾವಿಸುತ್ತಾನೆ, ಇದರಿಂದ ಹೊಸ ಜ್ಞಾನವನ್ನು ಪಡೆಯಲು, ಹೊಸ ಕೌಶಲ್ಯಗಳನ್ನು ಕಲಿಯಲು ಆತ ಆಸಕ್ತಿ ತೋರಿಸುವುದಿಲ್ಲ. ಕಲಿಕೆ ನಿಂತಾಗ ವ್ಯಕ್ತಿತ್ವ ವಿಕಸನವೂ ನಿಲ್ಲುತ್ತದೆ. ಅಹಂಕಾರವು ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತದೆ. 'ನಾನು' ಎಂಬ ಭಾವನೆ ಮೇಲುಗೈ ಸಾಧಿಸಿದಾಗ, ಇತರರ ಭಾವನೆಗಳಿಗೆ, ಅಭಿಪ್ರಾಯಗಳಿಗೆ ಬೆಲೆ ಸಿಗುವುದಿಲ್ಲ. ಇದು ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗಿನ ಸಂಬಂಧಗಳನ್ನು ಹಾಳುಮಾಡುತ್ತದೆ. ಅಹಂಕಾರದಿಂದಾಗಿ ವ್ಯಕ್ತಿ ಹೊಸ ಸವಾಲುಗಳನ್ನು ಎದುರಿಸಲು ಹಿಂಜರಿಯುತ್ತಾನೆ, ತನ್ನ ಸೀಮಿತ ವಲಯದಿಂದ ಹೊರಬರಲು ಇಷ್ಟಪಡುವುದಿಲ್ಲ. ಇದರಿಂದ ಜೀವನದ ವೈವಿಧ್ಯಮಯ ಅನುಭವಗಳಿಂದ ವಂಚಿತನಾಗುತ್ತಾನೆ. ಅಹಂ ಇರುವ ವ್ಯಕ್ತಿ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳಲು ಸಿದ್ಧನಿರುವುದಿಲ್ಲ, ತನ್ನನ್ನು ತಾನು ವಿಮರ್ಶಿಸಿಕೊಳ್ಳುವ ಪ್ರವೃತ್ತಿ ಇರುವುದಿಲ್ಲ. ಇದು ಸುಧಾರಣೆಗೆ ಅವಕಾಶ ನೀಡುವುದಿಲ್ಲ. ಅಹಂಕಾರವು ವ್ಯಕ್ತಿಯಲ್ಲಿ ನಿರಂತರವಾಗಿ ತನ್ನನ್ನು ತಾನು ಸಮರ್ಥಿಸಿಕೊಳ್ಳುವ, ಇತರರೊಂದಿಗೆ ಹೋಲಿಸಿಕೊಳ್ಳುವ ಪ್ರವೃತ್ತಿಯನ್ನು ಹುಟ್ಟುಹಾಕುತ್ತದೆ. ಇದು ಮಾನಸಿಕ ಒತ್ತಡ, ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗುತ್ತದೆ. ಎಲ್ಲ ಅವಕಾಶಗಳನ್ನು ಬಳಸಿಕೊಂಡು ಬೆಳೆಯಬಹುದಾದ, ಎಲ್ಲರಿಗೂ ಮಾದರಿಯಾಗಬಹುದಾದ ಪಥದಿಂದ ದೂರ ಸರಿಯುವಂತೆ ಮಾಡುತ್ತದೆ.
ಅಹಂ ತೊರೆಯುವುದು ಸುಲಭವಲ್ಲ, ಆದರೆ ಅಸಾಧ್ಯವೂ ಅಲ್ಲ. ಇದು ನಿರಂತರ ಪ್ರಯತ್ನ ಮತ್ತು ಆತ್ಮಾವಲೋಕನದಿಂದ ಸಾಧ್ಯ. ವಿನಮ್ರತೆಯು ಅಹಂಕಾರಕ್ಕೆ ಪ್ರತಿಯಾದ ಗುಣ. ನಾವು ಕಲಿಯಬೇಕಾದದ್ದು ಬಹಳಷ್ಟಿದೆ, ಮತ್ತು ಪ್ರತಿಯೊಬ್ಬರಿಂದಲೂ ಏನಾದರೂ ಕಲಿಯಬಹುದು ಎಂಬ ಭಾವನೆ ಬೆಳೆಸಿಕೊಂಡಾಗ ಮಾತ್ರ ಬದಲಿಸಬಹುದು, ಜ್ಞಾನದ ಸಾಗರದಲ್ಲಿ ನಾವು ಕೇವಲ ಒಂದು ಸಣ್ಣ ಹನಿ ಎಂಬುದನ್ನು ಅರಿತುಕೊಂಡು ಮುಂದಡಿ ಇಡುವುದು, ಇತರರ ಮಾತುಗಳನ್ನು ಆಲಿಸಿ, ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು. ಭಿನ್ನಾಭಿಪ್ರಾಯಗಳಿದ್ದರೂ, ಗೌರವದಿಂದ ವರ್ತಿಸಿ ಉತ್ತಮವಾದ ಸಲಹೆಗಳನ್ನೂ ಯಾರೇ ನೀಡಿದರೂ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳುವುದು. ಪ್ರತಿಯೊಬ್ಬರಿಗೂ ತಮ್ಮದೇ ಆದ ಅನುಭವ ಮತ್ತು ಜ್ಞಾನವಿರುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಂಡರೆ ಸಾಕು, ಇತರರು ನಮ್ಮನ್ನು ನೋಡುವ ರೀತಿಯೂ ಬದಲಾಗುತ್ತದೆ. ಎಲ್ಲರೂ ತಪ್ಪು ಮಾಡುವುದು ಸಹಜ. ತಪ್ಪುಗಳನ್ನು ಒಪ್ಪಿಕೊಂಡು ಮತ್ತು ಅವುಗಳಿಂದ ಪಾಠ ಕಲಿತು ಅಳವಡಿಸಿಕೊಂಡರೆ ನಮ್ಮನ್ನು ಇನ್ನಷ್ಟು ಬಲಶಾಲಿಗಳನ್ನಾಗಿ ಮಾಡುತ್ತದೆ. ತಪ್ಪುಗಳನ್ನು ಒಪ್ಪಿಕೊಳ್ಳುವ ಗುಣವೇ ನಿಜವಾದ ವ್ಯಕ್ತಿತ್ವ ವಿಕಸನದ ಲಕ್ಷಣ. 'ನಾನು' ಎಂಬ ಭಾವನೆಯಿಂದ ಹೊರಬಂದು, 'ನಾವು' ಎಂಬ ಭಾವನೆಯನ್ನು ಮೈಗೂಡಿಸಿಕೊಂಡು ಇತರರಿಗೆ ಸಹಾಯ ಮಾಡುವ ಮೂಲಕ, ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಅಹಂಕಾರವನ್ನು ಕಡಿಮೆ ಮಾಡಬಹುದು. ನಿಯಮಿತವಾಗಿ ಧ್ಯಾನ ಮಾಡುವುದು ಮತ್ತು ಆತ್ಮಾವಲೋಕನ ಮಾಡುವುದು ನಮ್ಮ ಆಲೋಚನೆಗಳನ್ನು ಸ್ಪಷ್ಟಪಡಿಸಲು ಮತ್ತು ಅಹಂಕಾರದ ಮೂಲವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಹಂಕಾರವು ನಮ್ಮನ್ನು ಬಂಧಿಸುವ ಒಂದು ಅಗೋಚರ ಸರಪಳಿ. ಈ ಸರಪಳಿಯನ್ನು ಕಳಚಿದಾಗ ಮಾತ್ರ ನಾವು ನಿಜವಾದ ಸ್ವಾತಂತ್ರ್ಯವನ್ನು ಅನುಭವಿಸಲು ಮತ್ತು ನಮ್ಮ ವ್ಯಕ್ತಿತ್ವವನ್ನು ಪೂರ್ಣವಾಗಿ ವಿಕಸನಗೊಳಿಸಲು ಸಾಧ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತು, ವೃತ್ತಿಗಳು ಇದನ್ನು ನಿರೀಕ್ಷಿಸುತ್ತವೆ. ಹೀಗಿದ್ದಾಗ ಮಾತ್ರ ಒಂದು ತಂಡದಲ್ಲಿ ಕಾರ್ಯ ನಿರ್ವಹಿಸುವ, ಯಶಸ್ಸನ್ನು ಗಿಟ್ಟಿಸಿಕೊಳ್ಳುವ, ಎಲ್ಲರಿಗೂ ಪ್ರೇರಣೆಯಾಗಬಹುದಾದ ಕಾರ್ಯಗಳನ್ನು ನಮ್ಮಿಂದ ಸಾಧ್ಯವಾಗಿಸುತ್ತವೆ. ವಯಕ್ತಿಕ ಹಾಗೂ ವೃತ್ತಿ ಬದುಕಿಗೆ ಶಕ್ತಿಯಾಗಬಹುದಾದ ಈ ಬದಲಾವಣೆಗೆ ಪ್ರಯತ್ನ ಖಂಡಿತವಾಗಿಯೂ ಭವಿಷ್ಯದ ದಿನಗಳನ್ನು ಭವ್ಯವಾಗಿಸುತ್ತದೆ.
ಶ್ರೀ ಉಮೇಶ್ವರ ಸೋಮಪ್ಪ ಮರಗಾಲ
ಶಿಕ್ಷಕರು
ಪಿಎಂಶ್ರೀ ಸರಕಾರಿ ಶಾಲೆ, ಕುನ್ನಾಳ
Comments
Post a Comment